ಜೂಡಿ ನ್ಯೂಸ್ :
ಕೃತಿ ಹೆಸರು - *ಚಂದಿರನಿಲ್ಲದ ಬಾನಿನಲಿ (ಗಜಲ್ ಸಂಕಲನ)*
ಲೇಖಕರ ಹೆಸರು - *ಅರುಣಾ ನರೇಂದ್ರ*
*ಮೊ. ೭೮೨೯೦೪೬೬೯೮*
ಪ್ರಕಟಿತ ವರ್ಷ...*೨೦೨೫*. ಬೆಲೆ...*೧೫೦ ₹*
ಪ್ರಕಾಶನ - *ಸಿದ್ಧಾರ್ಥ ಪ್ರಕಾಶನ.ಕೊಪ್ಪಳ ೫೮೩೨೩೧*
---------------------------------------
ಹಗಲು ರಾತ್ರಿ,ಅಮವಾಸ್ಯೆ ಹುಣ್ಣಿಮೆ ,ಕಾಲಚಕ್ರ ತಿರುಗಿದಂತೆ ವಸಂತ,ಗ್ರೀಷ್ಮ,ವರ್ಷ, ಶರತ್,ಹೇಮಂತ ಶಿಶಿರ,ಋತುಗಳ ಚಕ್ರ ತಿರುಗಿದಂತೆ ಪ್ರಕೃತಿಯ ಸೌಂದರ್ಯದಲ್ಲಿಯೂ ಬದಲಾವಣೆಯಾಗುತ್ತದೆ.
ಶರತ್ ಕಾಲದಲ್ಲಿ ಬೆತ್ತಲಾಗಿ ಮುನಿದು ಮುದುಡಿ ಕುಳಿತ ವನ ದೇವಿಯನ್ನು ಚೈತ್ರದಲ್ಲಿ ವಸಂತನು ಹಸಿರು ರೇಶ್ಮೆ ಸೀರೆ ಉಡಿಸಿ ಮುಡಿಗೆ ಮೊಗ್ಗುಗಳನು ಇರಿಸಿ, ಉಡಿಯಲಿ ಫಲತುಂಬಿ ಸಿಂಗರಿಸುತ್ತಾನೆ. ವನದೇವಿಯ ಮುಡಿಯ ಮೊಗ್ಗುಗಳು ಅರಳಿ ಕಂಪು ಪಸರಿಸಿದಾಗ ದುಂಬಿಗಳು ಮಕರಂದ ಹೀರಲು ಗುಂಪು ಗುಂಪಾಗಿ ಝೇಂಕರಿಸುತ್ತಾ ಬರುತ್ತವೆ. ಸಂತಸದಿಂದ ಹೂವಿಂದ ಹೂವಿಗೆ ಜಿಗಿಯುತ್ತಾ ನಲಿಯುತ್ತವೆ. ಕೋಗಿಲೆಗಳು ವನದೇವಿಯ ಸೌಂದರ್ಯಕ್ಕೆ ಮಾರು ಹೋಗಿ ಹಿಗ್ಗಿನಿಂದ ಯುಗಳ ಗೀತೆ ಹಾಡುತ್ತಾ ತನ್ನ ಸಂಗಾತಿಯನ್ನು ಕರೆಯುತ್ತವೆ. ಪ್ರಕೃತಿಯ ಈ ಸಂತಸದ ಮಿಲನವು ಕವಿ ಹೃದಯಕೆ ಕಾವ್ಯ ರಚಿಸಲು ಪ್ರೇರಣೆ ನೀಡುತ್ತದೆ.ಶರತ್ ದ ವಿರಹ ಮರೆತು ಸಂತಸದಲ್ಲಿ ಮೈಮರೆಯುತ್ತದೆ.
ಇಂದಿನ ಆಧುನಿಕ ಯುಗದಲ್ಲಿ ಎಲ್ಲರ ಬದುಕು ಒತ್ತಡದಿಂದ ಕೂಡಿದ್ದು ಜೀವನದ ಉತ್ಸಾಹ ಮತ್ತು ಆಯುಷ್ಯ ಕಡಿಮೆ ಮಾಡುತ್ತಿದೆ. ಪ್ರತಿಯೊಬ್ಬರಿಗೆ ವೃತ್ತಿಯಲ್ಲಿ ಹಲವಾರು ಒತ್ತಡಗಳಿದ್ದು ಅದರಿಂದ ಜೀವನ ಮೌಲ್ಯ ಕುಗ್ಗುತ್ತಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.ವೃತ್ತಿ ಮತ್ತು ಪ್ರವೃತ್ತಿ ನಮ್ಮ ಬದುಕಿನ ಎರಡು ಮುಖಗಳಾದಾಗ ಜೀವನವು ಸುಗಮವಾಗಿ ಸಾಗುತ್ತದೆ.ಬದುಕಿನ ನೋವು ನಿರಾಸೆಗಳನ್ನು ಮರೆಸಲು ಹತ್ತು ಹಲವಾರು ಹವ್ಯಾಸಗಳಿದ್ದು ಅದರಲ್ಲಿ ಸಾಹಿತ್ಯ ,ಸಂಗೀತ ,ಕ್ರೀಡೆಗಳು, ಅಧ್ಯಾತ್ಮ ಮನಕ್ಕೆ ನೆಮ್ಮದಿಯನ್ನು ನೀಡುತ್ತವೆ. ಬದುಕಿನ ಒತ್ತಡವನ್ನು ಕಡಿಮೆ ಮಾಡುತ್ತವೆ.ಅದರಲ್ಲೂ ಹೃದಯದ ಕಾವ್ಯವಾದ ಗಜಲ್ ಸಾಹಿತ್ಯ ಓದುವ ಬರೆಯುವ ಹವ್ಯಾಸ ಇದ್ದವರಿಗೆ ಬದುಕಿನಲ್ಲಿ ಬಂದ ಒತ್ತಡವು ಬೇಗ ನಿವಾರಣೆಯಾಗುತ್ತದೆ.
"ಗಜಲ್ ಹೃದಯ ಗಾಯಕ್ಕೆ ಮುಲಾಮು ಹಚ್ಚುವುದು". ಮನ ಸರೋವರ ಕದಡಿದಾಗ ಅದನ್ನು ತಿಳಿಗೊಳಿಸುವ ತಾಕತ್ತು ಗಜಲ್ ಸಾಹಿತ್ಯಕ್ಕೆ ಇದೆ.ಬೆಂದ ಹೃದಯಕ್ಕೆ ಸಾಂತ್ವನ ಹೇಳುವುದು ಇಂಥ ಶಕ್ತಿಯುತವಾದ ಕೋಮಲವಾದ ಗಜಲ್ ಸಾಹಿತ್ಯ.ಇದು ಹೃದಯವನ್ನು ಗೆಲ್ಲುತ್ತದೆ.ಗಜಲ್ ರಾಣಿ ಹೃದಯದ ವಿವಿಧ ಸಂಬಂಧಗಳನ್ನು ಬೆಸೆಯುತ್ತಾ, ಸ್ತ್ರೀ ಸಂವೇದನೆಯ ಕಂಬನಿ ಒರೆಸುತ್ತಾ,ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುತ್ತಾ, ಪುರುಷ ಪ್ರಧಾನ ಪಾರುಪತ್ಯವನ್ನು ವ್ಯಕ್ತಪಡಿಸುತ್ತಾ, ಆಧ್ಯಾತ್ಮಿಕ ತಂಗಾಳಿ ಬಿಸುತ್ತಾ,ಆತ್ಮಕ್ಕೆ ಹಿತವನ್ನು ಬಯಸುವ ಸಾಹಿತ್ಯ ಗಜಲ್ ಆಗಿದೆ.ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ, ಪ್ರೇಮ ,ವಿರಹ ,ಅನುರಾಗದೊಂದಿಗೆ ಆಧ್ಯಾತ್ಮಿಕ ನೆಲೆಗೆ ಕರೆದುಕೊಂಡು ಹೋಗಿ ಶೂನ್ಯದ ಕಡೆಗೆ ನಿಲ್ಲಿಸುತ್ತದೆ.
ಅರಬ್ಬಿ ಮೂಲದಿಂದ ವಲಸೆ ಬಂದ ಗಜಲ್ ಸಾಹಿತ್ಯ ಭಾರತದಲ್ಲಿ ಮೊದಲಿಗೆ ಫಾಸಿ೯ಭಾಷೆ ಯಲ್ಲಿ ಪ್ರಚಾರವಾಗಿದ್ದು,ನಂತರ ಉರ್ದು ಭಾಷೆಯಲ್ಲಿ ಸಮೃದ್ಧವಾದ ಪ್ರೇಮಕಾವ್ಯವಾಗಿ, ಹೃದಯದ ಕಾವ್ಯವಾಗಿ ಜನ ಮನವನ್ನು ಗೆದ್ದಿತು.ನಿಧಾನವಾಗಿ ಭಾರತದ ಇತರ ಭಾಷೆಗಳಲ್ಲಿ ತನ್ನ ಹರುವು ಹಬ್ಬಿಸಿತು.ಕನ್ನಡ ಭಾಷೆಯಲ್ಲಿ ಗಜಲ್ ಹುಟ್ಟಿ ಬೆಳೆಯಲು ಡಾ. ಶಾಂತರಸರು ಕಾರಣೀಭೂತರಾದವರು. ಕನ್ನಡ ಗಜಲ್ ಪಿತಾಮಹ ಎಂದು ಅವರಿಗೆ ಹೇಳಲಾಗುತ್ತದೆ.ಇಂದು ಕರ್ನಾಟಕದ ಎಲ್ಲಾ ಕವಿಗಳ ಮನ ಗೆದ್ದ ಸಾಹಿತ್ಯವೆಂದರೆ ಅದು ಗಜಲ್ ಎಂದು ಹೇಳಬಹುದು.ಎಲ್ಲಾ ಕವಿಗಳು ಗಜಲ್ ರಾಣಿಯ ಕೋಮಲ , ಹೃದಯ ಸ್ಪಂದಿಸುವ,ಪ್ರೇಮ ಸಾಗರದಲ್ಲಿ ತೇಲಿಸುವ, ಮನಮೋಹಕ ಕಾವ್ಯಕ್ಕೆ ಮರಳಾಗಿ ಅನೇಕರು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಆದರೆ ಗಜಲ್ ರಾಣಿ ಎಲ್ಲರಿಗೂ ಒಲಿಯುತ್ತಿಲ್ಲ. ಎಲ್ಲರಿಗೂ ತನ್ನ ಬಾಹ್ಯ ಚೆಲುವನ್ನು ತೋರಿಸುತ್ತಾ ಹುಚ್ಚು ಹಿಡಿಸಿದ್ದಾಳೆ.ಅವಳ ಆಂತರಿಕ ಚೆಲುವನ್ನು ಆಸ್ವಾದಿಸಬೇಕಾದರೆ ಅವಳನ್ನು ಬಹಳವಾಗಿ ಧ್ಯಾನಿಸಬೇಕಾಗುತ್ತದೆ ಎಂಬ ಮಾತು ಸತ್ಯವಾಗಿದೆ.ಇದು ಒಂದು ಹಾಡು ಗಬ್ಬವಾಗಿರುವುದರಿಂದ ಗಜಲ್ ರಚನೆಯಲ್ಲಿ ನಾವು ಗಜಲ್ ದ ಮೂಲ ಛಂದಸ್ಸನ್ನು ಅರಿತು ಗಜಲ್ ನ್ನು ರಚಿಸಬೇಕು.ಛಂದಸ್ಸು ಗಜಲ್ ದ ಜೀವಾಳ, ಕಾವ್ಯದ ಅಭಿವ್ಯಕ್ತಿಗೆ ಒಂದು ಸುಂದರ ಚೌಕಟ್ಟನ್ನು ಛಂದಸ್ಸು ಒದಗಿಸುತ್ತದೆ.ಗಜಲ್ ಗಳನ್ನು ಮಾತ್ರಗಣ,ಗೇಯತೆ,ಲಯ, ಮೃದು ಮಧುರ ಶಬ್ದಗಳಿಂದ ರಚಿಸಿದರೆ ಅದು ಒಂದು ಸುಂದರವಾದ ಹಾಡು ಗಬ್ಬವಾಗುತ್ತದೆ.ರಚಿಸಿದ ಗಜಲ್ ಸಂಗೀತಕ್ಕೆ ಅಳವಡಿಸಿದಾಗ ಅದರ ನಿಜ ಚೆಲುವು ಮಾಧುರ್ಯಕ್ಕೆ ಮನ ಆನಂದ ಪಡುತ್ತದೆ.
ಗಜಲ್ ರಚನೆಯಲ್ಲಿ ಮತ್ಲಾ, ಮಕ್ತಾ, ಕಾಫಿಯ, ರದೀಫ್, ರವಿ ,ಅಲಾಮತ್ ಗಳಿಗೆ ಇರುವಷ್ಟೇ ಮಹತ್ವ ಛಂದಸ್ಸು ಮಾತ್ರಾಗಣಗಳಿಗೆ ಇದೆ. ಪ್ರತಿಯೊಬ್ಬರು ಗಜಲ್ ರಚನೆಯಲ್ಲಿ ಇವುಗಳನ್ನು ಗಮನಿಸಿ ಗಜಲ್ ರಚಿಸುವುದು ಬಹಳ ಮಹತ್ವವಾಗಿದೆ.ಗಜಲ್ ರಚನೆಯಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ 1. ಮುರದ್ಧಪ್ ಗಜಲ್ 2 ಗೈರ್ ಮುರದ್ಧಫ್ ಗಜಲ್ ಗಳೆಂದು ಇವೆ. ಮುರದ್ಧಫ್ ಗಜಲ್ ಎಂದರೆ ಅದರಲ್ಲಿ ರಧೀಪ್ ಮತ್ತು ಕಾಫಿಯಾ ಇರುತ್ತವೆ. ಗೈರ್ ಮುರದ್ಧಫ್ ಗಜಲ್ ದಲ್ಲಿ ಕೇವಲ ಕಾಫಿಯಾ ಇರುತ್ತದೆ. ಗಜಲ್ ದಲ್ಲಿ ಕಾಫಿಯಾ ಗಜಲ್ ದ ಜೀವಾಳವಾಗಿದ್ದು, ಅದು ಎಲ್ಲಾ ಗಜಲ್ ದಲ್ಲಿ ಇರಲೇಬೇಕು ಕಾಫಿಯಾ ಇರದಿದ್ದರೆ ಅದು ಗಜಲ್ ಅನಿಸಿಕೊಳ್ಳುವುದಿಲ್ಲ.
ಕನ್ನಡದಲ್ಲಿ ಗಜಲ್ ರಚಿಸುತ್ತಿರುವ ಶ್ರೇಷ್ಠ ಗಜಲ್ ಕಾರ್ತಿಯರಲ್ಲಿ ಕೊಪ್ಪಳದ ಅರುಣಾ ನರೇಂದ್ರ ಕೂಡ ಒಬ್ಬರಾಗಿದ್ದಾರೆ.ಇವರು ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಸಾಹಿತಿ.ಇವರು ಮಕ್ಕಳ ಸಾಹಿತ್ಯ,ಆಧುನಿಕ ವಚನಗಳು,ರುಬಾಯಿಗಳು, ಹೈಕು,ತತ್ವಪದ ,ಗಜಲ್ ಗಳು ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪಚಿತರಾಗಿದ್ದಾರೆ.
ಈಗಾಗಲೇ ಮೂರು ಗಜಲ್ ಸಂಕಲಗಳನ್ನು ಪ್ರಕಟಿಸಿದ್ದು, ಈಗ ತುಂಬಾ ಉತ್ಸಾಹದಿಂದ *ಚಂದ್ರನಿಲ್ಲದ ಬಾನಿನಲಿ* ಎಂಬ ನಾಲ್ಕನೇ ಗಜಲ್ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ.
ಗಜಲ್ ಎಂದರೆ ಹೆಣ್ಣು ಮತ್ತು ಗಂಡಿನ ನಡುವಿನ ಪ್ರೇಮವನ್ನು ಪಿಸು ಮಾತಿನಲ್ಲಿ ಹೇಳುವ ಕಾವ್ಯ ಎಂಬುದು ಸಾಮಾನ್ಯ ಜನರ ಕಲ್ಪನೆ . ಗಜಲ್ ಕಾವ್ಯವು ಬಹಳ ವಿಶಾಲವಾಗಿದ್ದು ಲೌಕಿಕ ಪ್ರೇಮ ಮತ್ತು ಅಲೌಕಿಕ (ಆಧ್ಯಾತ್ಮಿಕ ) ಪ್ರೇಮ ಎರಡನ್ನು ಗಜಲ್ ಕಾವ್ಯದಲ್ಲಿ ನಾವು ಕಾಣಬಹುದು.ಅತ್ಯಂತ ಮಾರ್ಮಿಕವಾಗಿ ಅರ್ಥಪೂರ್ಣವಾಗಿ ಅರುಣಾ ನರೇಂದ್ರ ಅವರು ಲೌಕಿಕ ಮತ್ತು ಅಲೌಕಿಕ ವಿಷಯವನ್ನು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಕಲನದಲ್ಲಿ ಸಾಮಾಜಿಕ ತಲ್ಲಣ,ವ್ಯಕ್ತಿ ಚಿತ್ರಣ, ಮಹಿಳಾ ಸಂವೇದನೆಗಳನ್ನು ಗಜಲ್ ಗಳಲ್ಲಿ ಹಿಡಿದಿಟ್ಟಿದ್ದಾರೆ.
ಅರುಣಾ ನರೇಂದ್ರ ಅವರ *ಚಂದ್ರನಿಲ್ಲದ ಬಾನಿನಲಿ* ಗಜಲ್ ಸಂಕಲನದಲ್ಲಿ ನಿಯಮ ಬದ್ಧವಾದ ಒಟ್ಟು ೮೫ ಗಜಲ್ ಗಳಿವೆ.ಈ ಸಂಕಲನಕ್ಕೆ ನಾಡಿನ ಪ್ರಸಿದ್ಧ ವಿಮರ್ಶಕರೂ, ವಿದ್ವಾಂಸರೂ ಆದ ಡಾ.ವಾಯ್.ಎಮ್ ಯಾಕೊಳ್ಳಿ ನಿವೃತ್ತ ಪ್ರಾಚಾರ್ಯರು ಸವದತ್ತಿ ಅವರು ವಿಮರ್ಶಾತ್ಮಕ ಮತ್ತು ಮೌಲ್ಯಯುತವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಉತ್ತಮ ಛಾಯಾಗ್ರಾಹಕರು, ಕವಿಗಳು, ಉತ್ತಮ ಚಿಂತಕರೂ ಆದ ಶ್ರೀ .ವಿ.ಹರಿನಾಥ ಬಾಬು ಅವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ.ಕೃತಿ ಪ್ರಕಟನೆಗೆ ಮುಂಚೆ ಗಜಲ್ ಗಳನ್ನು ಓದಿದ ಕವಿಗಳು, ಸಂಘಟನಕಾರರು,ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಅಜು೯ನ ಗೊಳಸಂಗಿ ಗದಗ ಅವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಕೃತಿಗೆ ಆಕರ್ಷಕವಾದ ಮುಖ ಪುಟವನ್ನು ಗಜಲ್ ಕಾರರು ಹಾಗೂ ಹವ್ಯಾಸಿ ಚಿತ್ರಕಲಾವಿದರಾದ ಜಬಿವುಲ್ಲಾ ಎಮ್.ಅಸದ್ ಅವರು ರಚಿಸಿ ಕೃತಿಯ ಅಂದವನ್ನು ಹೆಚ್ಚಿಸಿದ್ದಾರೆ.ಶಿಕ್ಷಕಿಯರಾದ ಲಾಡ್ಮಾ ನದಾಫ್ ಅವರು ಕೃತಿಯ ಒಳಗಡೆ ಗಜಲ್ ಗಳ ಭಾವಕ್ಕೆ ತಕ್ಕಂತೆ ಸುಂದರವಾದ ಚಿತ್ರಗಳನ್ನು ಚಿತ್ರಿಸಿ ಓದಿಗರಿಗೆ ಸಂತಸವನ್ನು ತಂದಿದ್ದಾರೆ.
ಅರುಣಾ ನರೇಂದ್ರ ಅವರ *ಚಂದ್ರನಿಲ್ಲದ ಬಾನಿನಲಿ* ಗಜಲ್ ಸಂಕಲನವನ್ನು ಓದುತ್ತಾ ಹೋದಂತೆ ಲೌಕಿಕ ಪ್ರೇಮವನ್ನು ಸೂಚಿಸುತ್ತಾ ಅಲೌಕಿಕವಾದ ಪ್ರೀತಿಯನ್ನೇ ಅಪ್ಪಿಕೊಂಡಿರುವುದು ಕಂಡುಬರುತ್ತದೆ. ಗಜಲ್ ಎಂದರೇನೇ ಧ್ಯಾನ, ಅನುಸಂಧಾನ ಆ ನಿರಾಕಾರನಾದ ಭಗವಂತನಲ್ಲಿ ನಿವೇದಿಸಿಕೊಳ್ಳುವುದು, ಅಕ್ಕಮಹಾದೇವಿ ಮಲ್ಲಿಕಾರ್ಜುನನ್ನು ಧ್ಯಾನಿಸಿದಂತೆ, ಮೀರಾ ಕೃಷ್ಣನನ್ನು ಆರಾಧಿಸಿದಂತೆ, ರಾಧೆ ಮುರುಳಿಧರನನ್ನು ಪ್ರೀತಿಸಿದಂತೆ ಜೊತೆ ಜೊತೆಗೆ ಅರುಣಾ ನರೇಂದ್ರ ಅವರು ನಿರಾಕಾರನಾದ ಭಗವಂತನನ್ನು ಓಲೈಸುವಂಥ ಗಜಲ್ ಗಳು, ಸಾಮಾಜಿಕ ಹಾಗೂ ವ್ಯಕ್ತಿ ಚಿತ್ರಣದ ಗಜಲುಗಳು ಈ ಸಂಕಲನದಲ್ಲಿ ನಮಗೆ ಓದಲು ಸಿಗುತ್ತವೆ.
*ಮತ್ತೆ ಬರುತ್ತೇನೆಂದು ಹೇಳಿ ಹೋದೆ ಕತ್ತಲಾಯಿತು ಏಕೆ ಬರಲಿಲ್ಲ*
*ಸುತ್ತ ಹುಡುಕಿದೆ ಚುಕ್ಕಿ ಅಂಗಿ ಕಳಚಿ ಬಾನು ಬೆತ್ತಲಾಯಿತು ಏಕೆ ಬರಲಿಲ್ಲ*
ಇದು ಒಂದು ನಲ್ಲನ ಬರುವನ್ನು ಕಾಯುವ ಕಾತರದ ಗಜಲಾಗಿದ್ದು ಬರವನೆಂದು ಮಾತು ಕೊಟ್ಟು ಮರೆತವನಿಗಾಗಿ ಹೃದಯ ಹಂಬಲಿಸುವ ಗಜಲ್ ಇದಾಗಿದ್ದು ಗಜಲ್ ಕಾರ್ತಿ ಈ ಗಜಲ್ ದಲ್ಲಿ ಅದ್ಭುತವಾದ ರೂಪಕಗಳಿಂದ ತನ್ನ ಮನದ ಅಳಲನ್ನು ವ್ಯಕ್ತಪಡಿಸಿದ್ದಾರೆ. ರಾತ್ರಿ ಕಳೆದು ಬೆಳಗಾಯಿತು ಎಂದು ಹೇಳುವ ಪರಿಯನ್ನು ರೂಪಕದಲ್ಲಿ ಚುಕ್ಕಿ ಅಂಗಿ ಕಳಚಿ ಬಾನು ಬೆತ್ತಲಾಯಿತು, ಮೋಡಗಳ ಮುಖಕ್ಕೆ ಬಣ್ಣ ಮೆತ್ತಲಾಯಿತು, ಪಾರಿಜಾತದ ಬೀಜ ಬಿತ್ತಲಾಯಿತು, ಹೀಗೆ ಉತ್ತಮವಾದ ರೂಪಕಗಳೊಂದಿಗೆ ಹೃದಯದ ತಳಮಳವನ್ನು ಸೊಗಸಾಗಿ ಗಜಲ್ ದಲ್ಲಿ ಚಿತ್ರಿಸಿದ್ದಾರೆ.
*ಹೊಳೆಯ ಸಾಲಿನಲಿ ಹೊನ್ನ ಬಿತ್ತಿ ಬೆಳೆದವನ ಮನದಲ್ಲೇ ನಿರಾಶೆಯ ಕಾರ್ಮೋಡ ಕವಿದಿದೆ*
*ಕಳೆ ಕಸ ತೆಗೆದು ಹೊಲ ಹಸನು ಮಾಡಿ ಹಸಿರುಕ್ಕುವ ಎದೆಯಲ್ಲಿ ಬೆಂಕಿ ಹತ್ತಿ ಉರಿದಿದೆ*
ಇದು ಒಂದು ಸಾಮಾಜಿಕ ಹಾಗೂ ರೈತನ ಬದುಕಿನ ಭವಣೆಯನ್ನು ಸಾರುವ ಗಜಲ್ ಆಗಿದೆ. ಕಾಲಕಾಲಕ್ಕೆ ಮಳೆ ಬರದೆ ರೈತನ ಬದುಕು ಅಸ್ತವ್ಯಸ್ತವಾಗಿದ್ದು ಜಗಕ್ಕೆ ಅನ್ನ ನೀಡುವ ರೈತನೇ ಅನ್ನಕ್ಕಾಗಿ ಬೊಗಸೆ ಒಡ್ಡುವ ಕಾಲ ಬಂದಿದ್ದು , ಉಣ್ಣಲು ಅನ್ನವಿಲ್ಲದೆ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿಕೊಳ್ಳುವ ಸ್ಥಿತಿ ಇದ್ದರೂ ಆಳುವ ಅರಸರು ಯಾವ ಸಹಾಯವನ್ನು ಮಾಡದಿರುವುದಕ್ಕೆ ಗಜಲ್ ಕಾರ್ತಿ ನೊಂದು ಈ ಮಣ್ಣಿನ ಮಕ್ಕಳ ಬಿಡಲಾರದ ಮಣ್ಣನಂಟು ,ಸಾಲ ತೀರಿಸಲಾಗದೆ ಕೊರಳೊಡ್ಡುವ ಸ್ಥಿತಿಯನ್ನು ಸೊಗಸಾಗಿ ಗಜಲ್ ದಲ್ಲಿ ವಿವರಿಸಿದ್ದಾರೆ .
*ಜಗವೆಲ್ಲ ನನ್ನ ಜರಿಯಲಿ ಬಿಡು ನೀ ನನ್ನ ಜೊತೆಗಿರುವಿ ನನಗಷ್ಟೇ ಸಾಕು*
*ಯಾರೇ ಅಂದು ನೋಯಿಸಲಿ ಬಿಡು ನೀ ಕಣ್ಣೊರೆಸುವಿ ನನಗಷ್ಟೇ ಸಾಕು*
ಪ್ರಿಯತಮೆ ತನ್ನ ಪ್ರಿಯಕರನಿಗೆ ತನ್ನ ಮನದಾಳದ ಮಾತು ಹೇಳಬಯಸುತ್ತಾಳೆ.ಜಗವೆಲ್ಲ ನನ್ನನ್ನು ಜರಿಯಲ್ಲಿ ಬಿಡು ನೀ ನನ್ನ ಜೊತೆಗಿದ್ದರೆ ಅಷ್ಟೇ ಸಾಕು ಯಾರೇ ಅಂದು ನನಗೆ ನೋಯಿಸಿದರೂ ಕಣ್ಣೊರೆಸುವವನು ನೀ ಇರುವಾಗ ನನಗೆ ಅಷ್ಟೇ ಸಾಕು ಎಂದು ಹೇಳುತ್ತಾಳೆ.. ಬಾಳ ಪ್ರಯಾಣದಲ್ಲಿ ನೀ ನನಗೆ ನಾನು ನಿನಗೆ ಜೊತೆಯಾಗಿ ಸಾಗೋಣ ಸಖಾ ಬಾಳಿನ ಒಂದೊಂದು ಮೆಟ್ಟಿಲು ಏರಿ ಬಾನ ನಕ್ಷತ್ರಗಳನ್ನು ಹಿಡಿಯೋಣವೆಂದು ಪ್ರಿಯತಮೆ ಪ್ರಿಯಕರನಿಗೆ ಉತ್ಸಾಹ ತುಂಬುವ ಗಜಲ್ ಇದಾಗಿದ್ದು ಸುಂದರ ಪ್ರತಿಮೆಗಳೊಂದಿಗೆ ವಿವರಿಸಿದ್ದಾರೆ.
*ನೀನಿಲ್ಲದ ತವರು ನನಗೆ ಎರವಾಯ್ತು ಹಡೆದವ್ವ*
*ಇನ್ನೆಲ್ಲಿ ಹುಡುಕಲಿ ಮುಖ ಮರೆಯಾಯಿತು ಹಡೆದವ್ವ*
ಹೆತ್ತ ತಾಯಿಯನ್ನು ಕಳೆದುಕೊಂಡ ಹೆಣ್ಣು ಮಗಳ ಮನದ ಅಳಲು, ಹೆಣ್ಣು ಮಕ್ಕಳು ಎಷ್ಟೇ ವಯಸ್ಸಾಗಿದ್ದರೂ ಗಂಡನ ಮನೇಲಿ ಎಷ್ಟೇ ಸಂಪತ್ತು ಇದ್ದರೂ ತವರಿನ ಹಂಬಲ ಮತ್ತು ತಾಯಿಯ ಪ್ರೀತಿ ಮರೆಯುವುದಿಲ್ಲ . ತಾಯಿ ತೀರಿಕೊಂಡ ಸಂದರ್ಭದಲ್ಲಿ ಮಗಳು ಪಡುವ ದುಃಖವನ್ನು ಮನ ಮಿಡಿಯುವಂತೆ ಬರೆದಿದ್ದಾರೆ.ಜಾನಪದ ಹೇಳುವಂತೆ ಹೆಣ್ಣು ಮಕ್ಕಳಿಗೆ ತಾಯಿ ಇದ್ದರೆ ತವರು ಎಂಬುದನ್ನು ಗಜಲ್ ದಲ್ಲಿ ವಿವರಿಸಿದ್ದಾರೆ.ತಾಯಿ ಇಲ್ಲದ ತವರು ನನಗೆ ಇಂದು ಎರವಾಯಿತು ಹಡೆದವ್ವ ನಿನ್ನ ಮುಖ ಎಲ್ಲಿ ಹುಡುಕಲೆಂದು ತಾಯಿಯ ಅಂತಿಮ ದರ್ಶನ ಮಾಡುವ ಹೆಣ್ಣು ಮಗಳ ನೋವನ್ನು ಬಿತ್ತರಿಸಿದ ಗಜಲ್ ಇದಾಗಿದೆ .
*ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನ*
*ನೀನೂ ಇರುವುದಿಲ್ಲ ಬಂಧನ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ*
ಇದು ಒಂದು ಅಧ್ಯಾತ್ಮಿಕ ಗಜಲ್ ಆಗಿದ್ದು ಇಲ್ಲಿ ಎಲ್ಲವೂ ನಶ್ವರ! ಯಾರೂ ಈ ಭೂಮಿಯ ಮೇಲೆ ಶಾಶ್ವತವಾಗಿ ಇರುವುದಿಲ್ಲ ಒಂದು ದಿನ ಈ ನೆಲದ ಋಣ ತೀರಿಸಿಕೊಂಡು ಹೋಗುತ್ತೇವೆ ಎಲ್ಲರೂ. ನಾನೆಂಬ ಅಹಂ ತೊರೆದು ಎಲ್ಲರಿಗೂ ಪ್ರೀತಿಯನ್ನು ಹಂಚುತ್ತಾ ನಗುನಗುತ್ತಾ ಬದುಕು ಸಾಗಿಸೋಣ.ರಾಜನಿರಲಿ, ಫಕೀರನಿರಲಿ, ಸಿರಿವಂತನಿರಲಿ, ಬಡವನಿರಲಿ ಎಲ್ಲರೂ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗಬೇಕಾಗುತ್ತದೆಂದು ನಶ್ವರದ ತತ್ವವನ್ನು ಸಾರುವ ಗಜಲ್ ಇದಾಗಿದೆ. ನಾನು ಇಲ್ಲ ನೀನೂ ಇಲ್ಲ ಎಲ್ಲವೂ ಬಯಲೆಂದು ಸಾರಿದ ಶರಣರ,ಸಂತರ,ಸೂಫಿಗಳ ತತ್ವವನ್ನು ಬಿತ್ತರಿಸುವ ಗಜಲ್ ಸೊಗಸಾಗಿ ಹೆಣೆದಿದ್ದಾರೆ .
*ನೀ ಕೊಟ್ಟು ಹೋದ ನೋವುಗಳನ್ನು ಎದೆಯಲ್ಲಿ ಇಟ್ಟುಕೊಂಡಿರುವೆ ಸಖಾ*
*ನೀ ಬಿಟ್ಟು ಹೋದ ನೆನಪುಗಳನ್ನು ಉಡಿಯಲ್ಲಿ ತುಂಬಿಕೊಂಡಿರುವ ಸುಖಾ*
ತೊರೆದ ಸಖನನ್ನು ನೆನೆಸಿಕೊಳ್ಳುತ್ತಾ ಸಖಿ ತನ್ನ ಮನದ ಭಾವನೆಗಳನ್ನು ಗಜಲ್ ರೂಪದಲ್ಲಿ ಬಿತ್ತರಿಸಿದ್ದಾಳೆ.ಸಖಾ ನೀ ಕೊಟ್ಟ ನೋವುಗಳನ್ನು ಎದೆಯಲ್ಲಿ ಅಡಗಿಸಿ ಇಟ್ಟುಕೊಂಡಿದ್ದೇನೆ, ನೀ ಬಿಟ್ಟು ಹೋದ ನೆನಪುಗಳನ್ನು ಉಡಿಯಲ್ಲಿ ತುಂಬಿಕೊಂಡಿದ್ದೇನೆ. ಹಗಲಿರಳು ಅತ್ತು ಅತ್ತು ಕಣ್ಣೀರು ಬತ್ತಿ ಹೋಗಿವೆ.ನೀ ಕೊಟ್ಟ ಮುತ್ತುಗಳನ್ನು ನನ್ನ ದುಪ್ಪಟ್ಟದ ತುಂಬಾ ಇಟ್ಟು ಸಿಂಗರಿಸಿದ್ದೇನೆಂದು ಒಂಟಿ ಬದುಕಿನ ಭವಣೆಯನ್ನು ಗಜಲ್ ಕಾತಿ೯ ರೂಪಕಗಳೊಂದಿಗೆ ವಿವರಿಸಿದ್ದಾರೆ .
*ನೀ ಹಚ್ಚಿಕೊಳ್ಳುವ ಅತ್ತರಿನದೇ ವಾಸನೆ ಬರುತ್ತಿದೆ ಎಲ್ಲಿರುವೆ*
*ಮೊಹೊಬ್ಬತ್ತಿನ ಈ ಹಾಡಿನಲ್ಲಿ ನಿನ್ನದೇ ಧ್ವನಿ ಕೇಳುತ್ತಿದೆ ಎಲ್ಲಿರುವೆ*
ತನ್ನ ಪ್ರಿಯಕರನನ್ನು ಹುಡುಕುವ ಗಜಲ್ ಇದು . ಅವನು ಹಚ್ಚಿಕೊಳ್ಳುವ ಅತ್ತರಿನ ಸುವಾಸನೆ ಪ್ರಕೃತಿಯಲ್ಲಿ ಹರಡಿದೆ. ಪ್ರತಿ ವಸ್ತುವಿನಲ್ಲಿ ಅವನ ಚಿತ್ರ ಕಾಣುವುದು,ಹೆಜ್ಜೆಗಳ ಗುರುತು, ಅವನ ನಗುವಿನ ಅಲೆಗಳು ಎದೆಗೆ ಅಪ್ಪುವುದು ಹೀಗೆ ಅವನ ಕಾಣದ ಅವನ ಕುರುಹುಗಳನ್ನು ಹುಡುಕುತ್ತಾ ಹೋಗುವ ಪರಿ ಸೊಗಸಾಗಿ ವಿವರಿಸಿದ್ದಾರೆ . ಕಣ್ಣಿಗೆ ಕಾಣುವ ಕೈಗೆ ಸಿಗದ ಅವನನ್ನು ಹುಡುಕುವ ಕಾರ್ಯದ ಬಗ್ಗೆ ರೂಪಕಗಳೊಂದಿಗೆ ವಿವರಿಸಿದ್ದಾರೆ . ಇಲ್ಲಿ ಅಕ್ಕಮಹಾದೇವಿ ಮಲ್ಲಿಕಾರ್ಜುನನ್ನು ಹುಡುಕುವ ರೀತಿ ಗಜಲ್ ಕಾರ್ತಿ ರೂಪಕಗಳನ್ನು ಉಪಯೋಗಿಸಿದ್ದಾರೆ .
*ನೂರಾರು ಕೆಲಸಗಳ ಒತ್ತಡವಿದ್ದರೂ ಮನಸ್ಸು ನಿನ್ನನ್ನೇ ನೆನೆಸಿದೆ*
*ಸಾವಿರಾರು ವ್ಯಸನಗಳ ನಡುವೆಯೂ ಹೃದಯ ನಿನ್ನನ್ನೇ ಬಯಸಿದೆ*
ದೂರಾದ ಪ್ರಿಯಕರನ ನೆನಪು ಆಗಾಗ ಕಾಡುತ್ತದೆ , ಏನೇ ಎಷ್ಟೇ ಕೆಲಸದ ಒತ್ತಡವಿದ್ದರೂ ಮನಸ್ಸು ಅವನನ್ನು ಸದಾ ನೆನೆಯುತ್ತದೆ ಅವನ ಸಾಂಗತ್ಯ ಬಯಸುತ್ತದೆ.ಅವನ ಮೌನ ಸಹಿಸಲಾಗದೆ ಅವಳು ಅವನಿಗೆ ನೂರು ಪ್ರಶ್ನೆ ಕೇಳುತ್ತಾಳೆ.ಅವನು ಬರುವ ದಾರಿಯನ್ನು ಕಾಯುತ್ತಾಳೆ,ಹೃದಯದಲ್ಲಿ ಪ್ರೀತಿಯ ಸಸಿ ನೆಟ್ಟು ಒಲವಿನ ನೀರೆರೆದು ಒಲವಿನ ಹೂ ಅರಳಿಸಿದವನ ಕಾಣದೆ ಮನ ತಳಮಳ ವಾಗುವುದನ್ನು ಗಜಲ್ ಕಾರ್ತಿ ಸುಂದರವಾದ ರೂಪಗಳಿಂದ ತನ್ನ ಮನದ ಬಯಕೆಯನ್ನು ವ್ಯಕ್ತ ಪಡಿಸಿದ್ದಾರೆ.
ಅರುಣಾ ನರೇಂದ್ರ ಅವರು ನುರಿತ ಗಜಲ್ ಕಾರ್ತಿಯಾಗಿದ್ದಾರೆ. ಅವರ ಕೃತಿ *ಚಂದ್ರನಿಲ್ಲದ ಬಾನಿನಲಿ* ಸಂಕಲನದಲ್ಲಿ ಗಜಲ್ ಗೆ ಬೇಕಾಗುವ ಉಪಮೆ ರೂಪಕಗಳು ಸಶಕ್ತವಾಗಿದ್ದು ಓದುಗರ ಹೃದಯ ತಲುಪುತ್ತವೆ ಚಿಂತನೆಗೆ ಹಚ್ಚುತ್ತವೆ. ಅರುಣಾ ನರೇಂದ್ರ ಅವರು *ಅರುಣಾ* ಎಂದು ತಕಲ್ಲುಸ್ ( ಕಾವ್ಯನಾಮ) ದಿಂದ ಗಜಲ್ ರಚಿಸಿದ್ದಾರೆ.ಈ ಸಂಕಲನದಲ್ಲಿ ಮುರ್ದಫ್ ಗಜಲ್, ಗೈರ್ ಮುರ್ದಫ್ ಗಜಲ್ ಇವೆ . ಕೆಲವು ಜುಲ್ ಕಾಫಿಯಾ ಗಜಲ್, ಬಹು ಕಾಫಿಯಾಗಳೂ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಅರುಣಾ ನರೇಂದ್ರ ಅವರ ಕೃತಿ *ಚಂದ್ರನಿಲ್ಲದ ಬಾನಿನಲಿ* ಯುವ ಬರಹಗಾರರಿಗೆ ಗಜಲ್ ರಚನೆಯ ಬಗ್ಗೆ ಒಂದು ಕೈಪಿಡಿಯಾಗಿ ಮಾರ್ಗದರ್ಶನ ಮಾಡುತ್ತದೆ. ಅರುಣಾ ನರೇಂದ್ರ ಅವರಿಂದ ಇನ್ನೂ ವಿವಿಧ ರೀತಿಯ ಉತ್ತಮ ಗಜಲ್ ಗಳು ರಚನೆ ಆಗಲಿ ಎಂದು ಶುಭ ಹಾರೈಸುತ್ತೇನೆ.



Comments
Post a Comment